ಶನಿವಾರ, ಏಪ್ರಿಲ್ 13, 2013

ಜನಸಾಹಿತ್ಯವೆಂಬ ಹೊಸ ಚಳವಳಿಯ ಮುನ್ನುಡಿ

-ಅರುಣ್ ಜೋಳದಕೂಡ್ಲಿಗಿ
 
 
 
 

   ಸಾಮಾನ್ಯ ಜನ ಉಸಿರಾಡಲು ಕಷ್ಟವಾದಂತಹ ಯಾವುದೇ ಕಾಲದ ಹೊಟ್ಟೆಯೊಳಗಿಂದ ಪ್ರತಿರೋಧದ ಕಿಡಿಯೊಂದು ಹೊಮ್ಮುತ್ತದೆ. ಇದು ಎಲ್ಲ ಕಾಲಕ್ಕೂ ಆದದ್ದೇ. ನಮ್ಮ ಕಾಲವೂ ಅಂತಹ ಬಿಕ್ಕಟ್ಟುಗಳ ಮೈ ಪಡೆದಿದೆ. ಸಾವಿರಾರು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕೋಮುವಾದದ ಉರಿ ಮೈಮಸ್ಸು ಸುಡುವಷ್ಟು ಹೆಚ್ಚಾಗುತ್ತಿದೆ. ಹಳ್ಳಿಜನ ಬದುಕನ್ನು ಚೀಲಕ್ಕೆ ತುಂಬಿ ನಗರಕ್ಕೆ ಮುಖ ಮಾಡಿದ್ದಾರೆ. ಜನಪ್ರತಿನಿಧಿಗಳು ದುಡ್ಡು ರಾಶಿಮಾಡುವಲ್ಲಿ, ಮೋಜುಮಸ್ತಿಯಲ್ಲಿ ಮೈ ಮರೆತಿದ್ದಾರೆ. ಇಂತಹ ಹೊತ್ತಲ್ಲಿ ಬರಹಗಾರರು ತಮ್ಮ ದ್ವನಿಗೆ ಬೆಂಕಿಯ ಶಕ್ತಿ ತುಂಬಬೇಕಿದೆ.

   ಆದರೆ ಬಹುಪಾಲು ಕನ್ನಡದ ಹಿರಿಕಿರಿ ಬರಹಗಾರರು  ಕಾಲದ ಕ್ರೌರ್ಯವನ್ನು ನೋಡಿಯೂ ತಣ್ಣಗೆ ಕುಳಿತಿರುವುದು ನಿಚ್ಚಳವಾಗಿದೆ. ಹಾಗೆಯೆ ಎಲ್ಲವೂ ಮಾರಾಟದ ಸರಕಾಗಿರುವಾಗ ಸಾಹಿತ್ಯವನ್ನೂ ಸರಕಾಗಿಸಿ  ಸಂಭ್ರಮಿಸುವ ಸಾಹಿತಿಗಳ ನಡೆ ಒಂದೆಡೆಯಿದೆ. ಇಂತಹ ಹೊತ್ತಲ್ಲಿ ಈ ಎಲ್ಲವನ್ನು ಒಟ್ಟಾಗಿಸಿಕೊಂಡು ಜನಸಾಮಾನ್ಯರನ್ನು ಶೋಷಿಸುವ ಶಕ್ತಿಗಳ ವಿರುದ್ಧದ ದ್ವನಿಯನ್ನು ದೊಡ್ಡದು ಮಾಡಲು ಧಾರವಾಡದಲ್ಲಿ ಮಾರ್ಚ ೨೩,೨೪ ರಂದು ಜನಸಾಹಿತ್ಯ ಸಮಾವೇಶ ನಡೆಯಿತು. ಇದು ಈ ಕಾಲದ ನಿರ್ಲಿಪ್ತತೆಗೆ ರೋಸಿಹೋಗಿದ್ದ ಎಲ್ಲಾ ಮನಸ್ಸುಗಳನ್ನು ಒಟ್ಟಿಗೆ ತರುವಲ್ಲಿ ಕಾಲವೇ ಆಯೋಜಿಸಿದ ಕೊಂಡಿಯಂತಿತ್ತು. ಈ ಸಮಾವೇಶವು ಕೆಲವು ಚಾರಿತ್ರಿಕ ಪ್ರಶ್ನೆಗಳನ್ನು ಎತ್ತಿದೆ.

  ಚಳವಳಿಗಳಿಲ್ಲದೆ ಕನ್ನಡ ಸಾಹಿತ್ಯ ಸೊರಗುತ್ತಿದೆ, ಯಾವ ತಾತ್ವಿಕ ಬದ್ಧತೆ ಇಲ್ಲದೆ ಬರೆಯುವುದೆ ನಿಜವಾದ ಬರಹ, ಸಾಹಿತ್ಯದ ಸೃಷ್ಠಿಶೀಲ ಸಂಗತಿಗಳು ಮಾತ್ರ ಚರ್ಚೆಗೆ ಯೋಗ್ಯ, ಸಾಹಿತ್ಯದ ಓದು ಚರ್ಚೆ ಸಂವಾದಗಳು ಸಂಭ್ರಮಿಸುವಂತಹವು, ಈ ಸಂವಾದಗಳು ಕೂಡ ಜನರಿಗೆ ಪುಕ್ಕಟೆ ಯಾಕೆ ದೊರೆಯಬೇಕು? ಎನ್ನುವಂತಹ  ಲಹರಿರೂಪದ ನಿಲುವುಗಳು ಸಾಹಿತ್ಯದ ಕೆಲ ವಲಯದಲ್ಲಿ ಗಟ್ಟಿಯಾಗುತ್ತಿವೆ. ಈ ಕಾಲದಲ್ಲಿ ಇಂತಹ ನಿಲುವು ಕೂಡ ಜನವಿರೋಧಿ ಎನ್ನುವ ಎಚ್ಚರವನ್ನು ಜನಸಾಹಿತ್ಯ ಸಮಾವೇಶ ಮನಗಾಣಿಸಲು ಪ್ರಯತ್ನಿಸಿತು.


 ಮುಖ್ಯವಾಗಿ ನಮ್ಮ ಕಾಲದ ಬಿಕ್ಕಟ್ಟುಗಳಿಗೂ, ಇದೇ ಕಾಲದಲ್ಲಿ ಬರಹ ಮಾಡುತ್ತಿರುವ ಹೊಸ ತಲೆಮಾರಿನ ಸಾಹಿತ್ಯದೊಳಗೆ ಕಾಣುತ್ತಿರುವ ಈ ಬಿಕ್ಕಟ್ಟಿನ ಚಹರೆಗಳಿಗೂ, ಈ ಚಹರೆಯಲ್ಲಿ ಕನ್ನಡ ಸಾಹಿತ್ಯ ಪರಂಪರೆಯ ಛಾಯೆ ಮತ್ತು ಹೊಸ ಚಲನೆ ಎರಡನ್ನೂ ಗುರುತಿಸುವ ಗಂಭೀರ ಪ್ರಯತ್ನದ ಭಾಗವಾಗಿ ಇಲ್ಲಿನ ಚರ್ಚೆ ಸಂವಾದಗಳು ರೂಪುಗೊಂಡವು
 ಕನ್ನಡದಲ್ಲಿ ಸಾಹಿತ್ಯದ ಹೊಸತಲೆಮಾರು ಭಿನ್ನವಾದ ಬರಹದಲ್ಲಿ ತೊಡಗಿದೆ. ಈ ಬರಹದೊಳಗೆ ಕನ್ನಡದ ಹಿಂದಿನ ಚಳವಳಿಗಳ ಆಶಯಗಳು ಇದ್ದರೂ ಈ ನೆಲೆಯನ್ನು ಮೀರುವ ಒಂದು ಸ್ವರೂಪ ಹರಳುಗಟ್ಟುತ್ತಿದೆ. ಈ ಸ್ವರೂಪ ಹೀಗೆ ಎಂದು ಗೆರೆಕೊರೆದು ಒಂದು ಸ್ಪಷ್ಟ ಚಿತ್ರವನ್ನು ಕಟ್ಟಿ ತೋರಲಾಗದಷ್ಟು ಬಹುಸಂವೇದನೆಗಳು ಬೆರೆತಿವೆ. ಆದರೆ ಈ ಸಾಹಿತ್ಯದೊಳಗೆ ಕೆಲ ಸಮಾನ ಎಳೆಗಳಿರುವುದಂತೂ ನಿಜ.

   ಎಲ್ಲವನ್ನೂ ಮಾರುಕಟ್ಟೆಯ ಸರಕನ್ನಾಗಿಸಿ, ಸಾಮಾನ್ಯ ಜನ ಹುಸಿರು ದಿಮ್ಮಗಿಡಿದಿರುವ ಚಿತ್ರದೊಳಗಿನ ಬಿಕ್ಕಳಿಕೆಯ ದ್ವನಿ ಅಡಗಿದ ರಚನೆಗಳಿವೆ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವಷ್ಟು ಸಂಪತ್ತಿನ ಕೇಂದ್ರೀಕರಣ ಮತ್ತು ಇದರ ಇಕ್ಕಳದಲ್ಲಿ ನಿಂತು ಮಾತು ಹೊರಡಿಸುವ ಜನಪ್ರತಿನಿಧಿಗಳ ಬಗ್ಗೆ ಆತಂಕದ ಛಾಯೆಗಳಿವೆ. ಮೂಲಭೂತವಾದ ತನ್ನೆಲ್ಲಾ ಬಾಹುಗಳನ್ನು ಬಲಪಡಿಸಿಕೊಂಡು ಕೋಮುವಾದದ ಕರಾಳ ಛಾಯೆಯನ್ನು ದಟ್ಟವಾಗಿಸುವ ಬಗ್ಗೆ ಒಳಗೊಳಗೇ ತಣ್ಣನೆ ಪ್ರತಿರೋಧವಿದೆ. ಹೊಸ ವೇಷದಲ್ಲಿ ಅಡಗಿ ತನ್ನ ಬಾಹುಗಳನ್ನು ಚಾಚುತ್ತಿರುವ ಜಾತಿಭೂತದ ಬಗ್ಗೆ ದಲಿತ ಕೆಳಜಾತಿಗಳ ಒಳಗೆ ಸಣ್ಣ ಕಿಡಿ ಅಡಗಿದಂತಿದೆ. ಲಿಂಗದ ನೆಲೆಯ ತಳಮಳ ಮುಸುಗುಡುವ ಹಾಗೆ ಬೂದಿಯೊಳಗಣ ಕೆಂಡದ ಬಿಸಿ ಹಬೆಯಾಡುವ ಚಹರೆ ಕಾಣುತ್ತಿದೆ.


  ಈ ಎಲ್ಲಾ ಲಕ್ಷಣಗಳು ತುಂಬಾ ಢಾಳಾಗಿ ಒಡೆದು ತೋರದಿದ್ದರೂ ಅದರ ಸಣ್ಣ ಎಳೆಗಳು ಹೊಸತಲೆಮಾರಿನ ಸಾಹಿತ್ಯದೊಳಗೆ ಮೊಳೆಯುತ್ತಿರುವುದಂತೂ ನಿಚ್ಚಳವಾಗಿದೆ. ಇದರ ಸ್ವರೂಪಕ್ಕೆ ಒಂದು ಹೆಸರು ಕೊಡುವುದಾದರೆ ಅದನ್ನು ‘ಜನಸಾಹಿತ್ಯ’ ಎನ್ನಬಹುದು. ಯಾವಾಗಲೂ ಜನ ಸಾಹಿತ್ಯ ಇದ್ದೇ ಇದೆ. ಆದರೆ ಅದು ತನ್ನ ಕಾಲದ ಸಂಕಟಗಳ ಒಡಲೊಳಗಿಂದ ಬೇರೆ ಬೇರೆ ರೂಪದಲ್ಲಿ ಹೊಮ್ಮುತ್ತಿರುತ್ತದೆ. ಹೀಗೆ ಇಂದಿನ ಕಾರ್ಪೋರೇಟ್ ಜಗತ್ತಿನ ಅಪಾಯಗಳ ಹಿನ್ನೆಲೆಯಲ್ಲಿ ಇಂದು ಜನಸಾಹಿತ್ಯ ತನ್ನದೇ ಆದ ಸ್ವರೂಪವನ್ನು ಪಡೆಯಬೇಕಿದೆ. ಇಂತಹ ಜನಸಾಹಿತ್ಯವೆಂಬ  ಬೀಜವನ್ನು ಈ ಕಾಲದ ನೆಲದಲ್ಲಿ ಬಿತ್ತಿ ಅದು ಮೊಳೆಯುವ ಬಗ್ಗೆ ವಿಶ್ವಾಸವನ್ನು ಕರ್ನಾಟಕ ಜನಸಾಹಿತ್ಯ ಸಮಾವೇಶ ಕಟ್ಟಿಕೊಟ್ಟಿದೆ.

  ಮೂಲತಃ ಧಾರವಾಡದಲ್ಲಿ ನಡೆದ ಸಾಹಿತ್ಯ ಸಂಭ್ರಮವನ್ನು ತಾತ್ವಿಕವಾಗಿ ವಿರೋಧಿಸುವ ಒಂದು ದೊಡ್ಡ ಬಳಗ ಈ ಸಮಾವೇಶವನ್ನು ಆಯೋಜಿಸಿತ್ತು. ಆದರೆ ಇದು ಕೇವಲ ಸಂಭ್ರಮದ ವಿರುದ್ಧದ ಹುಸಿ ಆಚರಣೆಯಾಗದೆ, ಈ ಕಾಲದ ಒಳಗಿಂದ ಹುಟ್ಟಬಹುದಾಗಿದ್ದ ಎಚ್ಚರದ ಪ್ರಶ್ನೆಗಳನ್ನು ಹುಟ್ಟಿಸುವ ಕಡೆ ಚಲಿಸಿದ್ದು ದೊಡ್ಡ ಫಲಿತವಾಗಿದೆ. ಹಾಗಾಗಿ ಸಮಾನಾಸಕ್ತರೆಲ್ಲಾ ಒಟ್ಟಾಗಿ ಈ ಸಮಾವೇಶ ಮುಗಿದ ನಂತರ ‘ಇದು ಈ ಕಾಲದ ಹೊಸ ಚಳವಳಿಗೆ ಮುನ್ನುಡಿಯಾಗಬೇಕಿದೆ, ಆ ನಿಟ್ಟಿನಲ್ಲಿ ಆಯೋಜಕರ ಜತೆ ನಮ್ಮ ಜವಾಬ್ದಾರಿಯೂ ಹೆಚ್ಚಿದೆ’ ಎಂಬ ನಿಲುವಿಗೆ ಬರಲು ಸಾದ್ಯವಾಯಿತು. ಈ ಕಾರಣಕ್ಕೆ ಇದೊಂದು ಚಾರಿತ್ರಿಕ ಸಮಾವೇಶವೆ ಸರಿ.

 ಇಡೀ ಸಮಾವೇಶದಲ್ಲಿ ಕನ್ನಡದಲ್ಲಿ ಬರೆಯುತ್ತಿರುವ ಹೊಸಬರ ಸಾಹಿತ್ಯವನ್ನು ಕುರಿತು ಅವಲೋಕನ, ಸ್ವವಿಮರ್ಶೆ, ಮಿತಿಗಳ ಮೀರುವಿಕೆ, ಪರ್ಯಾಯಗಳ ಕಟ್ಟುವಿಕೆಯ ಬಗ್ಗೆ ಚರ್ಚೆ ನಡೆಯಿತು. ಇದು ಹಿರಿತಲೆಮಾರು ಕಿರಿತಲೆಮಾರನ್ನು ನೋಡುವ ನೋಟಕ್ರಮವನ್ನೂ ಒದಗಿಸಿತು. ಹೊಸ ತಲೆಮಾರಿನ ಬರಹಗಾರರು ‘ನಾನು ನನ್ನ ಬರಹ’ ಕುರಿತಂತೆ ಮಾತನಾಡಿ ಈ ಕಾಲದ ಬಿಕ್ಕಟ್ಟುಗಳು ಮತ್ತು ಸೃಜನಶೀಲತೆಯ ಸಂಕಟಗಳನ್ನು ಹೊರಹಾಕಿದರು. ಈ ಬಗೆಯ ಚರ್ಚೆ ಸಂವಾದಗಳು ಹೊಸಬರ ಸಾಹಿತ್ಯದ ಒಳಗಣ ರೂಪಗಳನ್ನು ಕಾಣುವ ಪ್ರಯತ್ನವಾಗಿತ್ತು.

     ಪ್ರಸ್ತಾವಿಕವಾಗಿ ಎಂ.ಡಿ.ಒಕ್ಕುಂದ ಅವರು ‘ಜಾಗತೀಕರಣ ಕೋಮುವಾದ ಕಾರ್ಪೋರೇಟ್ ಜಗತ್ತಿನ ವಿರುದ್ಧ ಇಂದು ಸಾಹಿತಿಗಳು ಹೇಗೆ ರಾಜಕೀಯಾರ್ಥಿಕ ಹೋರಾಟಗಳನ್ನು ರೂಪಿಸಬೇಕಾಗಿದೆ’ ಎನ್ನುವ ಮಾತುಗಳನ್ನಾಡಿದರು. ಮಹರಾಷ್ಟ್ರದ ಲೇಖಕರಾದ ಲಕ್ಷ್ಮಣ್ ಗಾಯಕವಾಡ, ಲೇಖಕಿ ಭಾನು ಮುಷ್ತಾಕ್, ಜಿ.ರಾಮಕೃಷ್ಣ ಅವರು ಜಾಗತೀಕರಣ ಉಂಟುಮಾಡಿದ ಪಲ್ಲಟಗಳ ಬೇರೆ ಬೇರೆ ನೆಲೆಗಳು ಮತ್ತು ಬರಹಗಾರರ ಜವಾಬ್ದಾರಿಯನ್ನು ಕುರಿತು ಗಮನಸೆಳೆದರು. ದು.ಸರಸ್ವತಿ, ನಾಗೇಶ ಹೆಗಡೆ, ಬಂಜಗೆರೆ ಜಯಪ್ರಕಾಶ್, ಎಸ್.ಬಿ.ಜೋಗುರ, ಮುಜಾಫರ್ ಅಸ್ಸಾದಿ  ವರ್ತಮಾನದ ಬಿಕ್ಕಟ್ಟನ್ನು ಬೇರೆ ಬೇರೆ ನೆಲೆಗಳಲ್ಲಿ ವಿವರಿಸಿಕೊಳ್ಳು ಪ್ರಯತ್ನಿಸಿದರು. ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಜಿ.ಸಿದ್ದರಾಮಯ್ಯ ಸಾಹಿತ್ಯ ಲೋಕದ ರಾಜಕಾರಣ ಮತ್ತು ಮೇಲು ಜಾತಿಯ ಶ್ರೇಷ್ಠತೆಯ ವ್ಯಸನದಲ್ಲಿ ಸಾಹಿತ್ಯದ ಕಲ್ಪನೆ ಬದಲಾದ ಬಗ್ಗೆ ನಿಷ್ಟುರ ಮಾತುಗಳನ್ನು ಆಡಿದರು.


 ಉಳಿದಂತೆ ತಾರಿಣಿ ಶುಭದಾಯಿನಿ, ಹೆಚ್.ಎಸ್. ಅನುಪಮಾ, ಕೆ.ಪಿ.ಸುರೇಶ್,ಮಹಾಂತೇಶ್ ನವಲಕಲ್, ಚನ್ನಪ್ಪ ಅಂಗಡಿ, ಎಸ್. ಗಂಗಾಧರಯ್ಯ, ರಂಗನಾಥ ಕಂಟನಕುಂಟೆ, ಕೆ.ಫಣಿರಾಜ, ಜಿ.ಪಿ. ಬಸವರಾಜ, ನಟರಾಜ ಬೂದಾಳ ಕನ್ನಡ ಸಾಹಿತ್ಯದ ಹೊಸ ತೆಲಮಾರಿನ ಸಾಹಿತ್ಯವನ್ನು ಅದರೆಲ್ಲಾ ಭಿನ್ನ ಚಹರೆಗಳನ್ನು ಗುರುತಿಸಲು ಪ್ರಯತ್ನಿಸಿದರು.
 ಹೊಸ ಸಾಹಿತ್ಯ ಚಳವಳಿಯ ಸಾಧ್ಯತೆ ಕುರಿತಂತೆ ‘ಎಲ್ಲಾ ಜನಪರ ಚಿಂತನೆಯ ಜತೆಗಾರರಾಗುತ್ತಲೇ ಚಳವಳಿಯ ಹೊಸ ಆಕಾರವೊಂದು ರೂಪುಗೊಳ್ಳಬೇಕಿದೆ. ಜನವಿರೋಧಿ ವ್ಯವಸ್ಥೆಯ ವಿರುದ್ಧ ಪರ್ಯಾಯದ ಆಲೋಚನೆಯನ್ನು ಚಳವಳಿಯಲ್ಲಿ ತರಬೇಕಿದೆ’ ಡಾ. ಸಿದ್ದನಗೌಡ ಪಾಟೀಲ್ ಮಾತನಾಡಿದರೆ, ಬಿ.ಎಂ ಪುಟ್ಟಯ್ಯ ಚಳವಳಿಯನ್ನು ಪರೀಕ್ಷೆ ಮಾಡುವ ವಿಧಾನದ ಬಗ್ಗೆ ಗಮನಸೆಳೆದರು.

ಡಾ.ವಿನಯಾ ಹೊಸ ತಲೆಮಾರಿನ ಕಾವ್ಯ ಕಥೆಗಳನ್ನು ಉಲ್ಲೇಖಿಸುತ್ತಾ ಅದರ ಒಳಗಿಂದಲೇ ನಮ್ಮ ಕಾಲದ ವ್ಶೆರುಧ್ಯಗಳನ್ನು ಗುರುತಿಸಿದರು. ತರೀಕೆರೆಯವರು ‘ಹೊಸ ಬರಹಗಾರರನ್ನೊಳಗೊಂಡ ಹೊಸ ಚಳವಳಿ ಹುಟ್ಟಬೇಕಾಗಿದೆ. ಅದಕ್ಕೆ ಕಾಲವೂ ಕೂಡಿದೆ, ಈ ಜನಸಾಹಿತ್ಯ ಸಮಾವೇಶವೇ ಅಂತಹ ಮೊದಲ ಹೆಜ್ಜೆಯಾಗಲಿ, ಹಿರಿಯರನ್ನು ಗೊಬ್ಬರ ಮಾಡಿಕೊಂಡು ಹೊಸತಲೆಮಾರು ಚಿಗುರೊಡೆಯಬೇಕಿದೆ’ ಎಂದು ಕರ್ನಾಟಕದ ವರ್ತಮಾನದ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ವಿಶ್ಲೇಷಿಸಿದರು.

 ಜನ್ನಿಯವರ ಹೋರಾಟದ ಹಾಡುಗಳು, ಕೇಸರಿ ಹರವು ಅವರ ನಗರ ಮತ್ತು ನದಿ ಕಣಿವೆ ಸಾಕ್ಷ್ಯಚಿತ್ರ ಈ ಸಮಾವೇಶಕ್ಕೆ ಒಂದು ಭಿನ್ನ ಆಯಾಮವನ್ನು ಒದಗಿಸಿತು. ಈ ಸಮಾವೇಶವನ್ನು ಆಯೋಜಿಸಿದ ಸಂಚಾಲಕರಾದ ಬಸವರಾಜ ಸೂಳಿಬಾವಿ, ಎಂ.ಡಿ.ಒಕ್ಕುಂದ, ಕೆ.ಆರ್.ದುರ್ಗಾದಾಸ್, ಶಂಕರ ಹಲಗತ್ತಿ, ಸಂಜೀವ ಕುಲಕರ್ಣಿ, ಜಗದೀಶ ಕೊಪ್ಪ, ಎಸ್.ಬಿ.ಜೋಗುರ, ಮಹಂತೇಶ ನವಲಕಲ್ ಮೊದಲಾದವರ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು. ಕರ್ನಾಟಕ ಜನಸಾಹಿತ್ಯ ಸಮಾವೇಶ ಸಾಹಿತ್ಯ ವಲಯದಲ್ಲಿ ಹೊಸ ಸಂಚಲನವನ್ನಂತೂ ಮೂಡಿಸಿದೆ, ಇದರ ಮುಂಚಲನೆಯನ್ನು ಕಾದು ನೋಡಬೇಕಾಗಿದೆ.


 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ