ಶನಿವಾರ, ಏಪ್ರಿಲ್ 13, 2013

ಜನಸಾಹಿತ್ಯವೆಂಬ ಹೊಸ ಚಳವಳಿಯ ಮುನ್ನುಡಿ

-ಅರುಣ್ ಜೋಳದಕೂಡ್ಲಿಗಿ
 
 
 
 

   ಸಾಮಾನ್ಯ ಜನ ಉಸಿರಾಡಲು ಕಷ್ಟವಾದಂತಹ ಯಾವುದೇ ಕಾಲದ ಹೊಟ್ಟೆಯೊಳಗಿಂದ ಪ್ರತಿರೋಧದ ಕಿಡಿಯೊಂದು ಹೊಮ್ಮುತ್ತದೆ. ಇದು ಎಲ್ಲ ಕಾಲಕ್ಕೂ ಆದದ್ದೇ. ನಮ್ಮ ಕಾಲವೂ ಅಂತಹ ಬಿಕ್ಕಟ್ಟುಗಳ ಮೈ ಪಡೆದಿದೆ. ಸಾವಿರಾರು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕೋಮುವಾದದ ಉರಿ ಮೈಮಸ್ಸು ಸುಡುವಷ್ಟು ಹೆಚ್ಚಾಗುತ್ತಿದೆ. ಹಳ್ಳಿಜನ ಬದುಕನ್ನು ಚೀಲಕ್ಕೆ ತುಂಬಿ ನಗರಕ್ಕೆ ಮುಖ ಮಾಡಿದ್ದಾರೆ. ಜನಪ್ರತಿನಿಧಿಗಳು ದುಡ್ಡು ರಾಶಿಮಾಡುವಲ್ಲಿ, ಮೋಜುಮಸ್ತಿಯಲ್ಲಿ ಮೈ ಮರೆತಿದ್ದಾರೆ. ಇಂತಹ ಹೊತ್ತಲ್ಲಿ ಬರಹಗಾರರು ತಮ್ಮ ದ್ವನಿಗೆ ಬೆಂಕಿಯ ಶಕ್ತಿ ತುಂಬಬೇಕಿದೆ.

   ಆದರೆ ಬಹುಪಾಲು ಕನ್ನಡದ ಹಿರಿಕಿರಿ ಬರಹಗಾರರು  ಕಾಲದ ಕ್ರೌರ್ಯವನ್ನು ನೋಡಿಯೂ ತಣ್ಣಗೆ ಕುಳಿತಿರುವುದು ನಿಚ್ಚಳವಾಗಿದೆ. ಹಾಗೆಯೆ ಎಲ್ಲವೂ ಮಾರಾಟದ ಸರಕಾಗಿರುವಾಗ ಸಾಹಿತ್ಯವನ್ನೂ ಸರಕಾಗಿಸಿ  ಸಂಭ್ರಮಿಸುವ ಸಾಹಿತಿಗಳ ನಡೆ ಒಂದೆಡೆಯಿದೆ. ಇಂತಹ ಹೊತ್ತಲ್ಲಿ ಈ ಎಲ್ಲವನ್ನು ಒಟ್ಟಾಗಿಸಿಕೊಂಡು ಜನಸಾಮಾನ್ಯರನ್ನು ಶೋಷಿಸುವ ಶಕ್ತಿಗಳ ವಿರುದ್ಧದ ದ್ವನಿಯನ್ನು ದೊಡ್ಡದು ಮಾಡಲು ಧಾರವಾಡದಲ್ಲಿ ಮಾರ್ಚ ೨೩,೨೪ ರಂದು ಜನಸಾಹಿತ್ಯ ಸಮಾವೇಶ ನಡೆಯಿತು. ಇದು ಈ ಕಾಲದ ನಿರ್ಲಿಪ್ತತೆಗೆ ರೋಸಿಹೋಗಿದ್ದ ಎಲ್ಲಾ ಮನಸ್ಸುಗಳನ್ನು ಒಟ್ಟಿಗೆ ತರುವಲ್ಲಿ ಕಾಲವೇ ಆಯೋಜಿಸಿದ ಕೊಂಡಿಯಂತಿತ್ತು. ಈ ಸಮಾವೇಶವು ಕೆಲವು ಚಾರಿತ್ರಿಕ ಪ್ರಶ್ನೆಗಳನ್ನು ಎತ್ತಿದೆ.

  ಚಳವಳಿಗಳಿಲ್ಲದೆ ಕನ್ನಡ ಸಾಹಿತ್ಯ ಸೊರಗುತ್ತಿದೆ, ಯಾವ ತಾತ್ವಿಕ ಬದ್ಧತೆ ಇಲ್ಲದೆ ಬರೆಯುವುದೆ ನಿಜವಾದ ಬರಹ, ಸಾಹಿತ್ಯದ ಸೃಷ್ಠಿಶೀಲ ಸಂಗತಿಗಳು ಮಾತ್ರ ಚರ್ಚೆಗೆ ಯೋಗ್ಯ, ಸಾಹಿತ್ಯದ ಓದು ಚರ್ಚೆ ಸಂವಾದಗಳು ಸಂಭ್ರಮಿಸುವಂತಹವು, ಈ ಸಂವಾದಗಳು ಕೂಡ ಜನರಿಗೆ ಪುಕ್ಕಟೆ ಯಾಕೆ ದೊರೆಯಬೇಕು? ಎನ್ನುವಂತಹ  ಲಹರಿರೂಪದ ನಿಲುವುಗಳು ಸಾಹಿತ್ಯದ ಕೆಲ ವಲಯದಲ್ಲಿ ಗಟ್ಟಿಯಾಗುತ್ತಿವೆ. ಈ ಕಾಲದಲ್ಲಿ ಇಂತಹ ನಿಲುವು ಕೂಡ ಜನವಿರೋಧಿ ಎನ್ನುವ ಎಚ್ಚರವನ್ನು ಜನಸಾಹಿತ್ಯ ಸಮಾವೇಶ ಮನಗಾಣಿಸಲು ಪ್ರಯತ್ನಿಸಿತು.


 ಮುಖ್ಯವಾಗಿ ನಮ್ಮ ಕಾಲದ ಬಿಕ್ಕಟ್ಟುಗಳಿಗೂ, ಇದೇ ಕಾಲದಲ್ಲಿ ಬರಹ ಮಾಡುತ್ತಿರುವ ಹೊಸ ತಲೆಮಾರಿನ ಸಾಹಿತ್ಯದೊಳಗೆ ಕಾಣುತ್ತಿರುವ ಈ ಬಿಕ್ಕಟ್ಟಿನ ಚಹರೆಗಳಿಗೂ, ಈ ಚಹರೆಯಲ್ಲಿ ಕನ್ನಡ ಸಾಹಿತ್ಯ ಪರಂಪರೆಯ ಛಾಯೆ ಮತ್ತು ಹೊಸ ಚಲನೆ ಎರಡನ್ನೂ ಗುರುತಿಸುವ ಗಂಭೀರ ಪ್ರಯತ್ನದ ಭಾಗವಾಗಿ ಇಲ್ಲಿನ ಚರ್ಚೆ ಸಂವಾದಗಳು ರೂಪುಗೊಂಡವು
 ಕನ್ನಡದಲ್ಲಿ ಸಾಹಿತ್ಯದ ಹೊಸತಲೆಮಾರು ಭಿನ್ನವಾದ ಬರಹದಲ್ಲಿ ತೊಡಗಿದೆ. ಈ ಬರಹದೊಳಗೆ ಕನ್ನಡದ ಹಿಂದಿನ ಚಳವಳಿಗಳ ಆಶಯಗಳು ಇದ್ದರೂ ಈ ನೆಲೆಯನ್ನು ಮೀರುವ ಒಂದು ಸ್ವರೂಪ ಹರಳುಗಟ್ಟುತ್ತಿದೆ. ಈ ಸ್ವರೂಪ ಹೀಗೆ ಎಂದು ಗೆರೆಕೊರೆದು ಒಂದು ಸ್ಪಷ್ಟ ಚಿತ್ರವನ್ನು ಕಟ್ಟಿ ತೋರಲಾಗದಷ್ಟು ಬಹುಸಂವೇದನೆಗಳು ಬೆರೆತಿವೆ. ಆದರೆ ಈ ಸಾಹಿತ್ಯದೊಳಗೆ ಕೆಲ ಸಮಾನ ಎಳೆಗಳಿರುವುದಂತೂ ನಿಜ.

   ಎಲ್ಲವನ್ನೂ ಮಾರುಕಟ್ಟೆಯ ಸರಕನ್ನಾಗಿಸಿ, ಸಾಮಾನ್ಯ ಜನ ಹುಸಿರು ದಿಮ್ಮಗಿಡಿದಿರುವ ಚಿತ್ರದೊಳಗಿನ ಬಿಕ್ಕಳಿಕೆಯ ದ್ವನಿ ಅಡಗಿದ ರಚನೆಗಳಿವೆ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವಷ್ಟು ಸಂಪತ್ತಿನ ಕೇಂದ್ರೀಕರಣ ಮತ್ತು ಇದರ ಇಕ್ಕಳದಲ್ಲಿ ನಿಂತು ಮಾತು ಹೊರಡಿಸುವ ಜನಪ್ರತಿನಿಧಿಗಳ ಬಗ್ಗೆ ಆತಂಕದ ಛಾಯೆಗಳಿವೆ. ಮೂಲಭೂತವಾದ ತನ್ನೆಲ್ಲಾ ಬಾಹುಗಳನ್ನು ಬಲಪಡಿಸಿಕೊಂಡು ಕೋಮುವಾದದ ಕರಾಳ ಛಾಯೆಯನ್ನು ದಟ್ಟವಾಗಿಸುವ ಬಗ್ಗೆ ಒಳಗೊಳಗೇ ತಣ್ಣನೆ ಪ್ರತಿರೋಧವಿದೆ. ಹೊಸ ವೇಷದಲ್ಲಿ ಅಡಗಿ ತನ್ನ ಬಾಹುಗಳನ್ನು ಚಾಚುತ್ತಿರುವ ಜಾತಿಭೂತದ ಬಗ್ಗೆ ದಲಿತ ಕೆಳಜಾತಿಗಳ ಒಳಗೆ ಸಣ್ಣ ಕಿಡಿ ಅಡಗಿದಂತಿದೆ. ಲಿಂಗದ ನೆಲೆಯ ತಳಮಳ ಮುಸುಗುಡುವ ಹಾಗೆ ಬೂದಿಯೊಳಗಣ ಕೆಂಡದ ಬಿಸಿ ಹಬೆಯಾಡುವ ಚಹರೆ ಕಾಣುತ್ತಿದೆ.


  ಈ ಎಲ್ಲಾ ಲಕ್ಷಣಗಳು ತುಂಬಾ ಢಾಳಾಗಿ ಒಡೆದು ತೋರದಿದ್ದರೂ ಅದರ ಸಣ್ಣ ಎಳೆಗಳು ಹೊಸತಲೆಮಾರಿನ ಸಾಹಿತ್ಯದೊಳಗೆ ಮೊಳೆಯುತ್ತಿರುವುದಂತೂ ನಿಚ್ಚಳವಾಗಿದೆ. ಇದರ ಸ್ವರೂಪಕ್ಕೆ ಒಂದು ಹೆಸರು ಕೊಡುವುದಾದರೆ ಅದನ್ನು ‘ಜನಸಾಹಿತ್ಯ’ ಎನ್ನಬಹುದು. ಯಾವಾಗಲೂ ಜನ ಸಾಹಿತ್ಯ ಇದ್ದೇ ಇದೆ. ಆದರೆ ಅದು ತನ್ನ ಕಾಲದ ಸಂಕಟಗಳ ಒಡಲೊಳಗಿಂದ ಬೇರೆ ಬೇರೆ ರೂಪದಲ್ಲಿ ಹೊಮ್ಮುತ್ತಿರುತ್ತದೆ. ಹೀಗೆ ಇಂದಿನ ಕಾರ್ಪೋರೇಟ್ ಜಗತ್ತಿನ ಅಪಾಯಗಳ ಹಿನ್ನೆಲೆಯಲ್ಲಿ ಇಂದು ಜನಸಾಹಿತ್ಯ ತನ್ನದೇ ಆದ ಸ್ವರೂಪವನ್ನು ಪಡೆಯಬೇಕಿದೆ. ಇಂತಹ ಜನಸಾಹಿತ್ಯವೆಂಬ  ಬೀಜವನ್ನು ಈ ಕಾಲದ ನೆಲದಲ್ಲಿ ಬಿತ್ತಿ ಅದು ಮೊಳೆಯುವ ಬಗ್ಗೆ ವಿಶ್ವಾಸವನ್ನು ಕರ್ನಾಟಕ ಜನಸಾಹಿತ್ಯ ಸಮಾವೇಶ ಕಟ್ಟಿಕೊಟ್ಟಿದೆ.

  ಮೂಲತಃ ಧಾರವಾಡದಲ್ಲಿ ನಡೆದ ಸಾಹಿತ್ಯ ಸಂಭ್ರಮವನ್ನು ತಾತ್ವಿಕವಾಗಿ ವಿರೋಧಿಸುವ ಒಂದು ದೊಡ್ಡ ಬಳಗ ಈ ಸಮಾವೇಶವನ್ನು ಆಯೋಜಿಸಿತ್ತು. ಆದರೆ ಇದು ಕೇವಲ ಸಂಭ್ರಮದ ವಿರುದ್ಧದ ಹುಸಿ ಆಚರಣೆಯಾಗದೆ, ಈ ಕಾಲದ ಒಳಗಿಂದ ಹುಟ್ಟಬಹುದಾಗಿದ್ದ ಎಚ್ಚರದ ಪ್ರಶ್ನೆಗಳನ್ನು ಹುಟ್ಟಿಸುವ ಕಡೆ ಚಲಿಸಿದ್ದು ದೊಡ್ಡ ಫಲಿತವಾಗಿದೆ. ಹಾಗಾಗಿ ಸಮಾನಾಸಕ್ತರೆಲ್ಲಾ ಒಟ್ಟಾಗಿ ಈ ಸಮಾವೇಶ ಮುಗಿದ ನಂತರ ‘ಇದು ಈ ಕಾಲದ ಹೊಸ ಚಳವಳಿಗೆ ಮುನ್ನುಡಿಯಾಗಬೇಕಿದೆ, ಆ ನಿಟ್ಟಿನಲ್ಲಿ ಆಯೋಜಕರ ಜತೆ ನಮ್ಮ ಜವಾಬ್ದಾರಿಯೂ ಹೆಚ್ಚಿದೆ’ ಎಂಬ ನಿಲುವಿಗೆ ಬರಲು ಸಾದ್ಯವಾಯಿತು. ಈ ಕಾರಣಕ್ಕೆ ಇದೊಂದು ಚಾರಿತ್ರಿಕ ಸಮಾವೇಶವೆ ಸರಿ.

 ಇಡೀ ಸಮಾವೇಶದಲ್ಲಿ ಕನ್ನಡದಲ್ಲಿ ಬರೆಯುತ್ತಿರುವ ಹೊಸಬರ ಸಾಹಿತ್ಯವನ್ನು ಕುರಿತು ಅವಲೋಕನ, ಸ್ವವಿಮರ್ಶೆ, ಮಿತಿಗಳ ಮೀರುವಿಕೆ, ಪರ್ಯಾಯಗಳ ಕಟ್ಟುವಿಕೆಯ ಬಗ್ಗೆ ಚರ್ಚೆ ನಡೆಯಿತು. ಇದು ಹಿರಿತಲೆಮಾರು ಕಿರಿತಲೆಮಾರನ್ನು ನೋಡುವ ನೋಟಕ್ರಮವನ್ನೂ ಒದಗಿಸಿತು. ಹೊಸ ತಲೆಮಾರಿನ ಬರಹಗಾರರು ‘ನಾನು ನನ್ನ ಬರಹ’ ಕುರಿತಂತೆ ಮಾತನಾಡಿ ಈ ಕಾಲದ ಬಿಕ್ಕಟ್ಟುಗಳು ಮತ್ತು ಸೃಜನಶೀಲತೆಯ ಸಂಕಟಗಳನ್ನು ಹೊರಹಾಕಿದರು. ಈ ಬಗೆಯ ಚರ್ಚೆ ಸಂವಾದಗಳು ಹೊಸಬರ ಸಾಹಿತ್ಯದ ಒಳಗಣ ರೂಪಗಳನ್ನು ಕಾಣುವ ಪ್ರಯತ್ನವಾಗಿತ್ತು.

     ಪ್ರಸ್ತಾವಿಕವಾಗಿ ಎಂ.ಡಿ.ಒಕ್ಕುಂದ ಅವರು ‘ಜಾಗತೀಕರಣ ಕೋಮುವಾದ ಕಾರ್ಪೋರೇಟ್ ಜಗತ್ತಿನ ವಿರುದ್ಧ ಇಂದು ಸಾಹಿತಿಗಳು ಹೇಗೆ ರಾಜಕೀಯಾರ್ಥಿಕ ಹೋರಾಟಗಳನ್ನು ರೂಪಿಸಬೇಕಾಗಿದೆ’ ಎನ್ನುವ ಮಾತುಗಳನ್ನಾಡಿದರು. ಮಹರಾಷ್ಟ್ರದ ಲೇಖಕರಾದ ಲಕ್ಷ್ಮಣ್ ಗಾಯಕವಾಡ, ಲೇಖಕಿ ಭಾನು ಮುಷ್ತಾಕ್, ಜಿ.ರಾಮಕೃಷ್ಣ ಅವರು ಜಾಗತೀಕರಣ ಉಂಟುಮಾಡಿದ ಪಲ್ಲಟಗಳ ಬೇರೆ ಬೇರೆ ನೆಲೆಗಳು ಮತ್ತು ಬರಹಗಾರರ ಜವಾಬ್ದಾರಿಯನ್ನು ಕುರಿತು ಗಮನಸೆಳೆದರು. ದು.ಸರಸ್ವತಿ, ನಾಗೇಶ ಹೆಗಡೆ, ಬಂಜಗೆರೆ ಜಯಪ್ರಕಾಶ್, ಎಸ್.ಬಿ.ಜೋಗುರ, ಮುಜಾಫರ್ ಅಸ್ಸಾದಿ  ವರ್ತಮಾನದ ಬಿಕ್ಕಟ್ಟನ್ನು ಬೇರೆ ಬೇರೆ ನೆಲೆಗಳಲ್ಲಿ ವಿವರಿಸಿಕೊಳ್ಳು ಪ್ರಯತ್ನಿಸಿದರು. ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಜಿ.ಸಿದ್ದರಾಮಯ್ಯ ಸಾಹಿತ್ಯ ಲೋಕದ ರಾಜಕಾರಣ ಮತ್ತು ಮೇಲು ಜಾತಿಯ ಶ್ರೇಷ್ಠತೆಯ ವ್ಯಸನದಲ್ಲಿ ಸಾಹಿತ್ಯದ ಕಲ್ಪನೆ ಬದಲಾದ ಬಗ್ಗೆ ನಿಷ್ಟುರ ಮಾತುಗಳನ್ನು ಆಡಿದರು.


 ಉಳಿದಂತೆ ತಾರಿಣಿ ಶುಭದಾಯಿನಿ, ಹೆಚ್.ಎಸ್. ಅನುಪಮಾ, ಕೆ.ಪಿ.ಸುರೇಶ್,ಮಹಾಂತೇಶ್ ನವಲಕಲ್, ಚನ್ನಪ್ಪ ಅಂಗಡಿ, ಎಸ್. ಗಂಗಾಧರಯ್ಯ, ರಂಗನಾಥ ಕಂಟನಕುಂಟೆ, ಕೆ.ಫಣಿರಾಜ, ಜಿ.ಪಿ. ಬಸವರಾಜ, ನಟರಾಜ ಬೂದಾಳ ಕನ್ನಡ ಸಾಹಿತ್ಯದ ಹೊಸ ತೆಲಮಾರಿನ ಸಾಹಿತ್ಯವನ್ನು ಅದರೆಲ್ಲಾ ಭಿನ್ನ ಚಹರೆಗಳನ್ನು ಗುರುತಿಸಲು ಪ್ರಯತ್ನಿಸಿದರು.
 ಹೊಸ ಸಾಹಿತ್ಯ ಚಳವಳಿಯ ಸಾಧ್ಯತೆ ಕುರಿತಂತೆ ‘ಎಲ್ಲಾ ಜನಪರ ಚಿಂತನೆಯ ಜತೆಗಾರರಾಗುತ್ತಲೇ ಚಳವಳಿಯ ಹೊಸ ಆಕಾರವೊಂದು ರೂಪುಗೊಳ್ಳಬೇಕಿದೆ. ಜನವಿರೋಧಿ ವ್ಯವಸ್ಥೆಯ ವಿರುದ್ಧ ಪರ್ಯಾಯದ ಆಲೋಚನೆಯನ್ನು ಚಳವಳಿಯಲ್ಲಿ ತರಬೇಕಿದೆ’ ಡಾ. ಸಿದ್ದನಗೌಡ ಪಾಟೀಲ್ ಮಾತನಾಡಿದರೆ, ಬಿ.ಎಂ ಪುಟ್ಟಯ್ಯ ಚಳವಳಿಯನ್ನು ಪರೀಕ್ಷೆ ಮಾಡುವ ವಿಧಾನದ ಬಗ್ಗೆ ಗಮನಸೆಳೆದರು.

ಡಾ.ವಿನಯಾ ಹೊಸ ತಲೆಮಾರಿನ ಕಾವ್ಯ ಕಥೆಗಳನ್ನು ಉಲ್ಲೇಖಿಸುತ್ತಾ ಅದರ ಒಳಗಿಂದಲೇ ನಮ್ಮ ಕಾಲದ ವ್ಶೆರುಧ್ಯಗಳನ್ನು ಗುರುತಿಸಿದರು. ತರೀಕೆರೆಯವರು ‘ಹೊಸ ಬರಹಗಾರರನ್ನೊಳಗೊಂಡ ಹೊಸ ಚಳವಳಿ ಹುಟ್ಟಬೇಕಾಗಿದೆ. ಅದಕ್ಕೆ ಕಾಲವೂ ಕೂಡಿದೆ, ಈ ಜನಸಾಹಿತ್ಯ ಸಮಾವೇಶವೇ ಅಂತಹ ಮೊದಲ ಹೆಜ್ಜೆಯಾಗಲಿ, ಹಿರಿಯರನ್ನು ಗೊಬ್ಬರ ಮಾಡಿಕೊಂಡು ಹೊಸತಲೆಮಾರು ಚಿಗುರೊಡೆಯಬೇಕಿದೆ’ ಎಂದು ಕರ್ನಾಟಕದ ವರ್ತಮಾನದ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ವಿಶ್ಲೇಷಿಸಿದರು.

 ಜನ್ನಿಯವರ ಹೋರಾಟದ ಹಾಡುಗಳು, ಕೇಸರಿ ಹರವು ಅವರ ನಗರ ಮತ್ತು ನದಿ ಕಣಿವೆ ಸಾಕ್ಷ್ಯಚಿತ್ರ ಈ ಸಮಾವೇಶಕ್ಕೆ ಒಂದು ಭಿನ್ನ ಆಯಾಮವನ್ನು ಒದಗಿಸಿತು. ಈ ಸಮಾವೇಶವನ್ನು ಆಯೋಜಿಸಿದ ಸಂಚಾಲಕರಾದ ಬಸವರಾಜ ಸೂಳಿಬಾವಿ, ಎಂ.ಡಿ.ಒಕ್ಕುಂದ, ಕೆ.ಆರ್.ದುರ್ಗಾದಾಸ್, ಶಂಕರ ಹಲಗತ್ತಿ, ಸಂಜೀವ ಕುಲಕರ್ಣಿ, ಜಗದೀಶ ಕೊಪ್ಪ, ಎಸ್.ಬಿ.ಜೋಗುರ, ಮಹಂತೇಶ ನವಲಕಲ್ ಮೊದಲಾದವರ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು. ಕರ್ನಾಟಕ ಜನಸಾಹಿತ್ಯ ಸಮಾವೇಶ ಸಾಹಿತ್ಯ ವಲಯದಲ್ಲಿ ಹೊಸ ಸಂಚಲನವನ್ನಂತೂ ಮೂಡಿಸಿದೆ, ಇದರ ಮುಂಚಲನೆಯನ್ನು ಕಾದು ನೋಡಬೇಕಾಗಿದೆ.


 

ಮಂಗಳವಾರ, ಏಪ್ರಿಲ್ 9, 2013

ಹೊಸ ಲೇಖಕರು, ಹೊಸ ಚಳವಳಿ

 
 krupe:prajavani
 
 
ಕರ್ನಾಟಕದ ಜನಪರ ಚಳವಳಿಗಳನ್ನು ಕುರಿತಂತೆ ಎರಡು ಗ್ರಹಿಕೆಗಳು ಚಾಲ್ತಿಯಲ್ಲಿವೆ. 1. ಇಲ್ಲಿ ಪ್ರಬಲವಾದ ಚಳವಳಿಗಳಿಲ್ಲ. ಕೆಲವೇನೋ ಇವೆ. ಆದರೆ ಅವಕ್ಕೆ ಮಂಕು ಹಿಡಿದಿವೆ. 2. ಚಳವಳಿಗಳಿಲ್ಲ ಎನ್ನುವುದು ಸವೆದ ಮತ್ತು ಅಜ್ಞಾನದ ಮಾತು. ಅನೇಕ ಚಳವಳಿಗಳು ಜೀವಂತವಾಗಿವೆ. ಮಹಿಳಾ ರೈತ ಆದಿವಾಸಿ ಮತೀಯವಾದಿ ವಿರೋಧಿ ಹೋರಾಟಗಳನ್ನು ಕಾಣಲಾಗದವರ ಮಾತಿದು.
 
ದಿಟವು, ಬಹುಶಃ ಇವೆರಡೂ ಗ್ರಹಿಕೆಗಳ ಒಳಗೂ ಆಚೆಗೂ ಇದೆ. ಕರ್ನಾಟಕದಲ್ಲಿ ಜನಪರ ಚಳವಳಿಗಳು ಇಲ್ಲವೆಂತಲ್ಲ. ಆದರೆ ಅವು ಪರಿಣಾಮದಲ್ಲಿ ಸೀಮಿತಗೊಂಡಿವೆ. ಹಿಂದೊಮ್ಮೆ ಚರಿತ್ರೆಯಲ್ಲಿ ತಮ್ಮ ಪಾತ್ರವನ್ನು ಚೆನ್ನಾಗಿಯೇ ನಿರ್ವಹಿಸಿದ ಚಳವಳಿಗಳು ವಿಘಟಿತಗೊಳ್ಳುತ್ತಿವೆ. ಈ ಚಳವಳಿ ರೂಪಿಸಿದವರಲ್ಲಿ ಹಲವರು ಪ್ರಭುತ್ವದ ಜತೆ ಸಖ್ಯ ಬೆಳೆಸಿ, ಅಧಿಕಾರದ ರುಚಿ ಸವಿದು, ಚಳವಳಿಯ ಅಗತ್ಯವಿರುವ ಜನರಿಂದ ದೂರವಾಗಿದ್ದಾರೆ. ಸಂಪತ್ತಿನ ಸಮಾನ ಹಂಚಿಕೆಯನ್ನು ಮಾಡಲಾಗದ ಪ್ರಭುತ್ವವು ದುಡಿವ ಜನರನ್ನು ಜಾತಿ ಉಪಜಾತಿಗಳಲ್ಲಿ ಒಡೆದುಹಾಕಿದೆ. ಇದರ ಫಲವಾಗಿ ಐಡೆಂಟಿಟಿ ರಾಜಕಾರಣವೀಗ ಮುಂಚೂಣಿಗೆ ಬಂದಿದೆ. ದಲಿತರ ಮಹಿಳೆಯರ ಬುಡಕಟ್ಟುಗಳ ಅಲೆಮಾರಿಗಳ ಅಲ್ಪಸಂಖ್ಯಾತರ ಚಳವಳಿಗಳು ಪ್ರತ್ಯೇಕ ಧಾರೆಗಳಾಗಿ ಹರಿಯುತ್ತಿವೆ.
 
ಎಲ್ಲಾ ಸಮುದಾಯಗಳಲ್ಲಿರುವ ದಮನಿತರನ್ನು ಅಪ್ಪಿಕೊಳ್ಳಬಲ್ಲ ವರ್ಗಪರಿಕಲ್ಪನೆ ಹಿಮ್ಮೆಟ್ಟಿದೆ. ಕೂಡುಹೋರಾಟದ ಕಲ್ಪನೆ ಕಷ್ಟವಾಗುತ್ತಿದೆ. ಸಂಗಾತಿಗಳಾಗಿ ಕೂಡಬೇಕಾಗಿದ್ದ ಸೈದ್ಧಾಂತಿಕ ಧಾರೆಗಳು ದಾಯಾದಿ ಕಲಹದಿಂದ ಹೊರಬಂದಿಲ್ಲ. ಪರದೇಶಿ ಹಣದ ಬಲದಲ್ಲಿ ನಡೆಯುತ್ತಿರುವ ಎನ್‌ಜಿಓಗಳು ಎಡಚಳವಳಿಗಳ ಪರಿಭಾಷೆಯನ್ನು ಅಪಹರಿಸಿ, ಅವನ್ನು ಅಪ್ರಸ್ತುತಗೊಳಿಸುವ ಕೆಲಸವನ್ನು ಮಾಡುತ್ತಿವೆ. ಜನಾಭಿಪ್ರಾಯ ರೂಪಿಸುವ ವಿಷಯದಲ್ಲಿ ಮಾರುಕಟ್ಟೆ ಅರ್ಥಶಾಸ್ತ್ರದ ಭಾಗವಾಗಿರುವ ಬಲಪಂಥೀಯ ಚಳವಳಿಗಳು ಹೆಚ್ಚು ಕ್ರಿಯಾಶೀಲವಾಗಿವೆ. ಇಷ್ಟರೊಳಗೂ ಹೊಸ ಸಮಾಜ ಕಟ್ಟುವ ಕನಸುಳ್ಳ ಚಳವಳಿಗಳು ಕಣ್ಬಿಡಲು ಯತ್ನಿಸುತ್ತಿವೆ.
 
ಚಳವಳಿ ಕುರಿತ ಈ ವೈರುಧ್ಯಮಯ ಚಿತ್ರಕ್ಕೂ ಸಾಹಿತ್ಯಕ ಚಳವಳಿಗಳಿಗೂ ಪರೋಕ್ಷ ಸಂಬಂಧವಿದೆ. ಕಾರಣ, ಕರ್ನಾಟಕದ ಸಾಹಿತ್ಯಕ ಚಳವಳಿಗಳು ಶುದ್ಧ ಸಾಹಿತ್ಯಕವಲ್ಲ. ಅವು ಸಾಮಾಜಿಕ ರಾಜಕೀಯ ಚಳವಳಿಗಳ ಭಾಗವಾಗಿಯೇ ಬೆಳೆದುಬಂದಿವೆ. ದಲಿತ ಮಹಿಳಾ ಚಳವಳಿಗಳ ಭಾಗವಾಗಿ ಬರಹವು ಹುಟ್ಟಿರುವುದನ್ನು ಬಲ್ಲವರಿಗೆ, ಇದು ಗೊತ್ತಿದೆ. ಚಳವಳಿಯೆಂದರೆ ಜನಸಮುದಾಯಗಳ ಆಲೋಚನಾ ಕ್ರಮವನ್ನು ರೂಪಿಸಬಲ್ಲ ಮತ್ತು ಅವರನ್ನು ಕ್ರಿಯೆಗೆ ತೊಡಗಿಸಿಬಲ್ಲ ಸಾಮಾಜಿಕ ಬದಲಾವಣೆಯ ಒಂದು ಶಕ್ತಿ. ಕರ್ನಾಟಕದಲ್ಲಿ ಕಸುವುಳ್ಳ ಚಳವಳಿಗಳು ಇಲ್ಲದಿರಲಿ ಅಥವಾ ಇದ್ದರೂ ಅವುಗಳು ಕ್ಷೀಣದೆಸೆಯಲ್ಲಿರುವ ಕಾರಣಗಳಲ್ಲಿ ಮುಖ್ಯವಾದುದು, ಜಾಗತೀಕರಣದ ಭಾಗವಾಗಿ ಬಂದಿರುವ ಮಾರುಕಟ್ಟೆ ಆರ್ಥಿಕತೆಯು ಬದುಕನ್ನು ವ್ಯಾಪಕವಾಗಿ ಆವರಿಸುತ್ತಿರುವುದು. ಇದಕ್ಕೆ ಪೂರಕವಾಗಿ ಜಾಗತೀಕರಣವನ್ನು ಗ್ರಹಿಸುವ ಮತ್ತು ಅದನ್ನು ಮುಖಾಮುಖಿ ಮಾಡುವ ವಿಷಯದಲ್ಲಿ ಅಗಾಧವಾದ ತಾತ್ವಿಕ ಅಸ್ಪಷ್ಟತೆ ವೈಚಾರಿಕ ಗೊಂದಲ ಇನ್ನೂ ಇರುವುದು. ಯಾವುದೇ ಚಳವಳಿಯ ಸತ್ವವು, ತನ್ನ ಎದುರಿನ ರಾಜಕೀಯ ಸಾಮಾಜಿಕ ವಾಸ್ತವವನ್ನು ಹೇಗೆ ಗ್ರಹಿಸಿದೆ, ತನ್ನ ಹಿಂದಿನ ಸಾಧನೆ ಮತ್ತು ಸೋಲುಗಳ ಜತೆಗೆ ಹೇಗೆ ಅನುಸಂಧಾನ ಮಾಡುತ್ತದೆ, ನಾಳಿನ ಕನಸನ್ನು ಹೇಗೆ ಕಾಣುತ್ತಿದೆ- ಎಂಬುದರ ಮೇಲೆ ನಿಂತಿರುತ್ತದೆ. ಚಳವಳಿಯೊಂದು ತನ್ನ ಕಾಲದ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಅದಕ್ಕೆ ಪ್ರತಿಕ್ರಿಯಿಸುವ ಪರಿ, ಮುಂದೆ ವಿಮರ್ಶೆಗೆ ಒಳಪಡಬಹುದು. ಆದರೆ ಅದು ತನ್ನದೇ ಆದ ಲೋಕದೃಷ್ಟಿಯನ್ನು ತಾತ್ಕಾಲಿಕವಾದರೂ ಹೊಂದಿರಬೇಕು.
70-80ರ ದಶಕದಲ್ಲಿ ಸಾಹಿತ್ಯಕ ಮತ್ತು ಸಾಮಾಜಿಕ ಚಳವಳಿಗಳು ಜಾತಿತಾರತಮ್ಯ, ವರ್ಗಭೇದ, ಲಿಂಗತಾರತಮ್ಯ, ಊಳಿಗಮಾನ್ಯ ಪದ್ಧತಿ, ಬ್ರಾಹ್ಮಣವಾದ ತಮ್ಮ ಎದುರಾಳಿಗಳೆಂದೂ, ಎಲ್ಲ ಎಡವಾದಿ ಸಿದ್ಧಾಂತಗಳು ತಮ್ಮ ಒಡನಾಡಿಗಳೆಂದೂ ಘೋಷಿಸಿಕೊಂಡಿದ್ದವು. ಆದರೆ ಈಗ ಎದುರಾಳಿಯನ್ನು ಮತ್ತು ಸಂಗಾತಿಗಳನ್ನು ವ್ಯಾಖ್ಯಾನಿಸಿಕೊಳ್ಳುವುದು ಇಷ್ಟು ಸರಳವಾಗಿಲ್ಲ.
 
ಕಾರಣ ಎದುರಾಳಿ ಕೇವಲ ಸ್ಥಳೀಯವಾಗಿಲ್ಲ. ಅದು ಚಹರೆರಹಿತವೂ ಆಗಿದೆ. ಮಾರುಕಟ್ಟೆ ಸಂಸ್ಕೃತಿಯ ತಾಯಿಯಾಗಿರುವ ಜಾಗತೀಕರಣವು ಕೊಲ್ಲುವ ಹಗೆಯೊ ಬಿಡುಗಡೆ ಮಾಡುವ ಗೆಳೆಯನೊ ಎಂಬ ಪ್ರಶ್ನೆಯನ್ನು ಗಮನಿಸಬಹುದು. ಕೆಲವರು ಜಾಗತೀಕರಣದಲ್ಲಿ ಕಬಳಿಸುವ ಉದ್ದೆೀಶ ಇರಬಹುದು, ಆದರೆ ವಾಸ್ತವದಲ್ಲಿ ಅದನ್ನು ನಿವಾರಿಸಲು ಸಾಧ್ಯವಿಲ್ಲ. ಅದರ ಲಾಭಪಡೆಯುವುದೇ ಈಗಿರುವ ಉಪಾಯ ಎಂಬ ಆಲೋಚನೆ ಹರಿಬಿಡುತ್ತಿರುವರು. ಎಲ್ಲವೂ ಮಾರುವ ಕೊಳ್ಳುವ ಸರಕಾಗಿ ಕಾಣುವ, ಜನರನ್ನು ಗಿರಾಕಿಗಳಾಗಿ ಪರಿಗಣಿಸುವ ಮಾರುಕಟ್ಟೆ ಸಂಸ್ಕೃತಿ, ಸ್ಪರ್ಧೆ ಮತ್ತು ಲಾಭನಷ್ಟಗಳನ್ನೇ ದೊಡ್ಡ ಮೌಲ್ಯವಾಗಿಸುತ್ತದೆ. ಈ ಸಂಸ್ಕೃತಿಯ ದೊಡ್ಡ ಫಲಾನುಭವಿಯಾದ ಭಾರತದ ಮಧ್ಯಮವರ್ಗ ಈ ನಿಲುವಿಗೆ ತನ್ನ ಸಮ್ಮತಿ ಕೊಟ್ಟಿದೆ. ಇಂಗ್ಲಿಷ್ ಮಾಧ್ಯಮ ಬೇಕೇ ಬೇಡವೇ ಕುರಿತು ನಡೆದ ಚರ್ಚೆಯನ್ನು ಇಲ್ಲಿ ನೆನೆಯಬಹುದು. ವಾಸ್ತವದಲ್ಲಿ ಇಂಗ್ಲಿಷ್ ಕೇವಲ ಭಾಷೆಯ ಅಥವಾ ಶಿಕ್ಷಣದ ಮಾಧ್ಯಮದ ಪ್ರಶ್ನೆಯಲ್ಲ. ಅದು ಮಾರುಕಟ್ಟೆಯ ಒಂದು ಉಪಕರಣ. ಇಂಗ್ಲಿಷ್‌ನ ಪರವಾಗಿ ವಾದಮಾಡಿದ ಕರ್ನಾಟಕದ ಯಶಸ್ವಿ ಬಂಡವಾಳಶಾಹಿಗಳು ಹೊಸ ಸಾಂಸ್ಕೃತಿಕ ನಾಯಕರಾಗಿ ಕಾಣುತ್ತಲಿರುವರು. ಜತೆಗೆ ದಲಿತ ಬಂಡವಾಳವಾದದ ಪರಿಕಲ್ಪನೆಯೂ ಜನಪ್ರಿಯಗೊಳ್ಳುತ್ತಿದೆ. ಇದರೊಟ್ಟಿಗೆ ಮತೀಯವಾದವೂ ಮಾರುಕಟ್ಟೆವಾದವೂ ಆಳುವ ಪ್ರಭುತ್ವಗಳೂ ಮಾಧ್ಯಮಗಳೂ ಬಹುಮಟ್ಟಿಗೆ ಜಾಗತಿಕ ಬಂಡವಾಳದೊಂದಿಗೆ ಏಕೀಭವಿಸಿವೆ. ಭಾರತದ ಕಾರ್ಪೊರೇಟ್ ಶಕ್ತಿಗಳು ಜನರ ಸಾಮೂಹಿಕ ಕಗ್ಗೊಲೆಗೆ ಕಾರಣರಾದ ಫ್ಯಾಸಿಸ್ಟ್ ರಾಜಕಾರಣಿಗಳನ್ನು ದೇಶದ ಚುಕ್ಕಾಣಿ ಹಿಡಿಯಬೇಕು ಎಂದು ಚುನಾವಣೆ ನಡೆಯುವ ಮುಂಚೆಯೆ ಘೋಷಿಸಿರುವುದು ಇದಕ್ಕೆ ಸಾಕ್ಷಿ.
 
ಇಂತಹದೊಂದು ಚಾರಿತ್ರಿಕ ಸನ್ನಿವೇಶವು ನಿಜವಾಗಿಯೂ ಹೊಸ ಸಾಮಾಜಿಕ ರಾಜಕೀಯ ಸಾಂಸ್ಕೃತಿಕ ಚಳವಳಿ ಹುಟ್ಟಿಗೆ ತಕ್ಕನಾಗಿದೆ. ಸನ್ನಿವೇಶ ಪಕ್ವವಾಗಿದ್ದರೂ ಚಳವಳಿ ರೂಪಿಸುವ ಶಕ್ತಿಗಳು ಕಡಿಮೆಯಾಗಿವೆ. ಬಂಡಾಯ ಸಾಹಿತ್ಯ ಸಂಘಟನೆಯ ಹೊತ್ತಲ್ಲಿ ದೇವನೂರು ಮಹಾದೇವರು ಬಂಡೆಗಳ ಮೇಲೆ ಚಿಗುರೊಡೆಯಬೇಕಿದೆ ಎಂದು ಹೇಳಿದ್ದರು. ಬಂಡೆ ಕಠೋರ ವಾಸ್ತವತೆಯ ಸಂಕೇತವಾಗಿದ್ದು ಚಿಗುರು ಹೊಸಸಮಾಜದ ಸೃಷ್ಟಿಯ ಕನಸಾಗಿತ್ತು. ಚಳವಳಿ ಚಿಗುರೊಡೆಯುವುದಕ್ಕೆ ಅದು ನೆಲದೊಳಗೆ ಬೇರು ತಳೆಯಬೇಕು. ಆದರೆ ಕೆಳಗೆ ಇರುವುದು ನೆಲವಲ್ಲ ಬಂಡೆ. ಈಗ ಚಳವಳಿಗಳು ಬಂಡೆಯ ಮೇಲಲ್ಲ ಮಾರುಕಟ್ಟೆಯ ಚಂಚಲವಾದ ಜಾರುನೆಲದಲ್ಲಿ ಕುಡಿಯೊಡೆಯಬೇಕಿದೆ. ಆದರೆ ನಾಟಿ ಹಾಕುವವರೂ ಕಡಿಮೆಯಾಗುತ್ತಿದ್ದಾರೆ.
ಯಾವುದೇ ಚಳವಳಿಯು ತಾತ್ವಿಕವಾಗಿ ಚರಿತ್ರೆಯನ್ನು ವ್ಯಾಖ್ಯಾನಿಸಿಕೊಳ್ಳುವುದನ್ನು, ಸಮಕಾಲೀನ ಸಮಾಜದ ಸನ್ನಿವೇಶವನ್ನು ಗ್ರಹಿಸುವುದನ್ನು ಹಾಗೂ ನಾಳಿನ ನಾಡಿನ ಕನಸನ್ನು ಕಟ್ಟಿಕೊಳ್ಳುವುದನ್ನು ಅದರ ಲೋಕದೃಷ್ಟಿ ಎನ್ನಬಹುದು. ಈ ಲೋಕದೃಷ್ಟಿ ಪ್ರಕಟವಾಗುವುದು ಅದರ ತಾತ್ವಿಕ ಪ್ರಣಾಳಿಕೆಯಲ್ಲಿ ಅರ್ಧವಾದರೆ, ಆಚರಣೆಯಲ್ಲಿ ಇನ್ನರ್ಧ. ಸಾಹಿತ್ಯಕ ಚಳವಳಿಯಲ್ಲಿ ಆಚರಣೆಯೆಂದರೆ, ಅದು ಸೃಷ್ಟಿಸುವ ಸಾಹಿತ್ಯ ಕೃತಿಗಳು. ಚಳವಳಿಯ ಸಾಮಾಜಿಕ ತಾತ್ವಿಕತೆ ಖಚಿತವಾಗಿದ್ದು, ಅದರ ಕೃತಿ ಪೊಳ್ಳಾಗಿದ್ದರೆ ಅದು ಸೋಲು. ಓದುಗರಿಗೆ ಲೋಕತಿಳಿವಳಿಕೆ ಮತ್ತು ಲೋಕಕ್ಕೆ ಮಿಡಿಯುವ ಸೂಕ್ಷ್ಮಸಂವೇದನೆಯು, ರಾಜಕೀಯ ಪ್ರಜ್ಞೆ ದೊರಕಿಸಿಕೊಡಬಲ್ಲ ಚಳವಳಿಗಳಿಂದ ಮಾತ್ರವಲ್ಲ ಆ ಕಾಲದ ಅತ್ಯುತ್ತಮ ಸಾಹಿತ್ಯ ಕೃತಿಗಳಿಂದಲೂ ರೂಪುಗೊಳ್ಳುತ್ತವೆ.
 
ಚಳವಳಿಯ ಯಶಸ್ಸು ಸೋಲುಗಳಲ್ಲಿ ಚಳವಳಿಗಾರರ ವ್ಯಕ್ತಿತ್ವಗಳ ಪಾತ್ರವೂ ಇದೆ. ಸಾಹಿತ್ಯಕ ಚಳವಳಿಗಳಲ್ಲಿ ಸೃಷ್ಟಿಯಾದ ಕೃತಿಗಳ ಜತೆಗೆ ಅದನ್ನು ಸೃಷ್ಟಿಸಿದವರ ಬದುಕು ಕೂಡ ಪ್ರಭಾವ ಬೀರುತ್ತದೆ. ಚಳವಳಿಗಾರರ ವ್ಯಕ್ತಿತ್ವದ ಇಂಟೆಗ್ರಿಟಿ ಮತ್ತು ಘನತೆ ಚಳವಳಿಗೆ ಶಕ್ತಿ ಕೊಡುವುದು ಮಾತ್ರವಲ್ಲ, ಅವರ ಬರಹಕ್ಕೂ ಪರಿಣಾಮ ಬೀರಬಲ್ಲ ನೈತಿಕತೆ ತಂದುಕೊಡುತ್ತದೆ. ದೇವನೂರರ `ಎದೆಗೆ ಬಿದ್ದ ಅಕ್ಷರ'ದ ಜನಪ್ರಿಯತೆಯ ಹಿಂದೆ ಅದರೊಳಗಿನ ಚಿಂತನೆ ಮಾತ್ರವಲ್ಲ ಅದರ ಲೇಖಕನ ಸಾರ್ವಜನಿಕ ವ್ಯಕ್ತಿತ್ವವೂ ಇದೆ ಎಂಬುದು ಗಮನಾರ್ಹ. ಇದನ್ನು ಮನಗಂಡೇ ಆಳುವ ವ್ಯವಸ್ಥೆಗಳು ನಾಯಕತ್ವವನ್ನು ಅನೈತಿಕಗೊಳಿಸಲು ಸದಾ ಯತ್ನಿಸುತ್ತವೆ. ಚರಿತ್ರೆಯಲ್ಲಿ ದಬ್ಬಾಳಿಕೆಯ ಪ್ರಭುತ್ವಗಳಿಗಿಂತ ಸೌಮ್ಯ ಮತ್ತು ಜಾಣ ಪ್ರಭುತ್ವಗಳು ನಾಯಕರನ್ನು ಹಾಗೂ ಚಳವಳಿಗಳನ್ನು ಹೆಚ್ಚು ಬಲಿತೆಗೆದುಕೊಂಡಿವೆ. ಅವು ಚಳವಳಿಗಳನ್ನು ಹೊಸಕಿ ಹಾಕುತ್ತವೆ ಇಲ್ಲವೇ ತಮ್ಮ ಕಾಲೊರಸನ್ನಾಗಿ ಮಾಡಿಕೊಳ್ಳುತ್ತವೆ. ಚಳವಳಿಗಾರರಲ್ಲಿ ಇರಬಹುದಾದ ವೈಯಕ್ತಿಕ ಮಹತ್ವಾಕಾಂಕ್ಷೆ ಮತ್ತು ಚಳವಳಿಯಲ್ಲಿರಬಹುದಾದ ತಾತ್ವಿಕ ವೈರುಧ್ಯ ಬಳಸಿಕೊಂಡು ಅದು ಕಾರ್ಯ ಸಾಧಿಸುತ್ತದೆ. ಪ್ರಭುತ್ವದ ಜತೆ ಚಳವಳಿ ಯಾವ ಬಗೆಯ ಸಂಬಂಧ ಇರಿಸಿಕೊಂಡಿದೆ ಎಂಬುದು ಜನತೆಯ ಜತೆ ಅದರ ಸಂಬಂಧವನ್ನು ನಿರ್ಣಯಿಸುವ ಸಂಗತಿಯೂ ಹೌದು. ಶಿಥಿಲಗೊಂಡ ನಾಯಕರು ಬೆಂತರವಾಗುತ್ತಾರೆ. ಅವರು ಆಡುವ ಮಾತು, ಬರೆವ ಬರೆಹ, ನಡೆವ ನಡೆ, ಅಪ್ರಾಮಾಣಿಕವಾಗಿ ಭಾಷೆ ಮಲಿನವೂ ಅಶ್ಲೀಲವೂ ಆಗುತ್ತದೆ. ವರ್ತನೆ ಅಣಕವಾಗುತ್ತದೆ. ಈ ದುರಂತವನ್ನು ತೀರಿಹೋದ ಹೊಸತಲೆಮಾರಿನ ಪ್ರತಿಭಾಶಾಲಿ ಕವಿ ಎನ್.ಕೆ. ಹನುಮಂತಯ್ಯ ಮೊಟ್ಟೆಯಿಟ್ಟು ಮರಿಮಾಡಬೇಕಾದ ನವಿಲುಗಳು ಮಾಂಸದಂಗಡಿಯಲ್ಲಿ ನೇತುಬಿದ್ದಿವೆ ಎಂಬ ವಿಷಾದಭರಿತ ರೂಪಕದಲ್ಲಿ ಪ್ರಕಟಿಸಿದ್ದರು. ಲೇಖಕರು ತಮ್ಮ ಕೊರಳಪಟ್ಟಿಯಲ್ಲಿ ದರಪಟ್ಟಿಯನ್ನು ತೂಗುಹಾಕಿಕೊಂಡು ನಿಂತಿದ್ದಾರೆ ಎಂದು ಪೀರ್‌ಬಾಷಾ ಅವರು ಹೇಳಿದ್ದು ಇದೇ ವಿಷಾದದಲ್ಲಿ. ಅದರಲೂ ಸಾಮುದಾಯಿಕ ಆಯಾಮವನ್ನು ತೆಗೆದು ವ್ಯಕ್ತಿವಾದವನ್ನು ಹುಟ್ಟಿಸಬಲ್ಲ ಮಾರುಕಟ್ಟೆ ಸಂಸ್ಕೃತಿ, ಈ ನೈತಿಕ ಶಿಥಿಲತೆಯನ್ನು ತೀವ್ರವಾಗಿ ಮಾಡಬಲ್ಲದಾಗಿದೆ. ಎಲ್ಲ ಕಾಲದ ಚಳವಳಿಗಳು ಪರಂಪರೆಯಿಂದ ಶಕ್ತಿಯನ್ನು ಆವಾಹಿಸಿದಷ್ಟೇ ಮುಖ್ಯವಾಗಿ ಪಿತೃಗಳ ಹತ್ಯೆಯನ್ನೂ ಮಾಡಿವೆ. ಈ ಹಿನ್ನೆಲೆಯಲ್ಲಿ ಹೊಸತಲೆಮಾರಿನ ಲೇಖಕರು ಒಂದು ಕಾಲಕ್ಕೆ ತಮ್ಮನ್ನು ಪ್ರಭಾವಿಸಿದ ಹಿರೀಕರ ಬಗ್ಗೆ ಪ್ರಕಟಿಸುತ್ತಿರುವ ಆದರ, ಆತಂಕ ಮತ್ತು ಅಸಹನೆಗಳನ್ನು ಅರ್ಥಮಾಡಿಕೊಳ್ಳಬೇಕಿದೆ.
 
ಕರ್ನಾಟಕದ ಮೂರ್ನಾಲ್ಕು ದಶಕಗಳ ಜನಪರ ಚಳವಳಿಗಳತ್ತ ಹಿನ್ನೋಟದಲ್ಲಿ ನೋಡುವಾಗ ಕಾಣುವ ವಿಷಾದಕರ ಚಿತ್ರವೆಂದರೆ, ತಾತ್ವಿಕ ಭಿನ್ನಮತಗಳು ಸಂವಾದಕ್ಕೆ ಬದಲು ವ್ಯಕ್ತಿತ್ವಗಳ ಸೆಣಸಾಟಕ್ಕೆ ಕಾರಣವಾಗಿರುವುದು; ನಿಷ್ಠುರ ಭಿನ್ನಮತಗಳ ಹಂಚಿಕೆ, ವಾಗ್ವಾದ ಮತ್ತು ಆತ್ಮವಿಮರ್ಶೆ ಮುಖ್ಯವಾಗಬೇಕಿದ್ದ ಕಡೆ, ಅಹಂಗಳ ಸಂಘರ್ಷವಾಗಿರುವುದು; ಸಂಗಾತಿಗಳ ಜತೆ ತಾತ್ವಿಕ ಭಿನ್ನಮತ ಮತ್ತು ವಾಗ್ವಾದ ನಡೆಯುವ ಕಡೆ, ಹಗೆಗಳಿಗಿಂತ ಹೆಚ್ಚಾಗಿ ಸಂಗಾತಿಗಳನ್ನು ದ್ವೇಷಿಸಿರುವುದು. ನೊಂದಹರೆಂಬ ಕಾರಣಕ್ಕೆ ನಿಷ್ಠುರ ಭಿನ್ನಮತ ಹೇಳಲಾಗದೆ ಹೋಗಿರುವುದು ಮತ್ತು ಹಾಗೆ ಹೇಳಿದಾಗ ಅದನ್ನು ವೈಯಕ್ತಿಕವಾಗಿ ತೆಗೆದುಕೊಂಡಿರುವ ಅಪ್ರಜಾಪ್ರಭುತ್ವೀಯ ಮನೋಭಾವ ಪ್ರಕಟವಾಗಿರುವುದು. ಸಮಾನ ಆಶಯವುಳ್ಳ ಚಳವಳಿಗಳ ಜತೆ ಮತ್ತು ವಿಮೋಚನಾ ಸಿದ್ಧಾಂತಗಳ ಜತೆ ಅರ್ಥಪೂರ್ಣ ಸಂವಾದ ನಡೆಯದೇ ಹೋದರೆ, ಕೂಡುಚಳವಳಿ ಹೇಗೆ ಸಾಧ್ಯವಾಗುತ್ತದೆ? ಇಂತಹ ಕೂಡುಚಳವಳಿ ರೂಪಿಸುವಲ್ಲಿ ಜನರ ನಡುವೆ ಸಂಬಂಧ ಬೆಸೆಯಬಲ್ಲ ಬರಹದ ಪಾತ್ರವು ಮುಖ್ಯವಾಗಿದೆ.
 
ಸಾಹಿತ್ಯ ಮತ್ತು ಚಳವಳಿ ಕುರಿತಂತೆ ಎರಡು ಗ್ರಹಿಕೆಗಳು ಜನಪ್ರಿಯವಾಗಿವೆ. 1. ಸಾಹಿತ್ಯವು ಸೃಜನಶೀಲ ಕಲೆಯಾಗಿದ್ದು ಮೂಲತಃ ವ್ಯಕ್ತಿವಿಶಿಷ್ಟ ಪ್ರತಿಭೆಯ ಫಲ. ಅದು ತಾನು ಪ್ರಜ್ಞಾಪೂರ್ವಕವಾಗಿ ಒಪ್ಪಿಕೊಂಡಿರುವ ಚಳವಳಿಯ ತಾತ್ವಿಕ ಚೌಕಟ್ಟು ಮೀರಿಹೋಗಬಲ್ಲದು ಎಂಬ ಗ್ರಹಿಕೆ. ಇದು ನಿಜ. ಆದರೆ ಗ್ರಹಿಕೆ ಅತಿಗೆ ಹೋದರೆ, ಸಾಹಿತ್ಯವು ಅತಿವಿಶಿಷ್ಟೀಕರಣದ ನೆಲೆ ಪಡೆದುಕೊಂಡು ಶ್ರೇಷ್ಠತೆಯ ವ್ಯಸನವಾಗುವುದು. 2. ಚಳವಳಿ ಸಾಮೂಹಿಕ ಕ್ರಿಯಾಶೀಲತೆಯಿಂದ ಹುಟ್ಟಿದ್ದು. ಅದಕ್ಕೆ ವ್ಯಕ್ತಿಸೃಷ್ಟಿಯ ಫಲವಾದ ಸಾಹಿತ್ಯವು ಅರ್ಥಪೂರ್ಣ ನೆಲೆಯಲ್ಲಿ ಸೇರಿಕೊಳ್ಳುತ್ತದೆ. ಅಂತಿಮವಾಗಿ ಅದರ ಉದ್ದೆೀಶ ಸಮೂಹದ ಆಲೋಚನ ಕ್ರಮವನ್ನು ಬದಲಿಸುವುದು ಎಂಬ ಗ್ರಹಿಕೆ. ಇದೂ ನಿಜವೇ. ಆದರೆ ಈ ವ್ಯಾಖ್ಯೆ ತುಸು ಹಳಿತಪ್ಪಿದರೆ, ಚಳವಳಿಯಲ್ಲಿ ಎಲ್ಲರ ಮಾತೂ ಭಿನ್ನಮತವಿಲ್ಲದೆ ಒಂದೇ ಆಗಿರಬೇಕೆಂದಾದಾಗ ಸರ್ವಾಧಿಕಾರಿ ಜಡತೆಯನ್ನು ಪಡೆಯುತ್ತದೆ.
ಚಳವಳಿ ಕೊಡುವ ರಾಜಕೀಯ ಪ್ರಜ್ಞೆಯು ಲೋಕವನ್ನು ಅರಿಯುವ ಮತ್ತು ವಿಶ್ಲೇಷಿಸುವ ಕ್ರಿಯೆಗೆ ನೆರವಾಗುತ್ತದೆ. ಬರಹಗಾರರು ಅದರ ತಾತ್ವಿಕತೆಯನ್ನು ಅರಗಿಸಿಕೊಂಡು ಕೃತಿಸೃಷ್ಟಿ ಮಾಡುತ್ತಾರೆ. ಇದು ಏಕಮುಖವಲ್ಲ. ಯಾಕೆಂದರೆ, ಶಕ್ತಕೃತಿಗಳು ತಮ್ಮನ್ನು ಪ್ರಭಾವಿಸಿದ ತಾತ್ವಿಕತೆಯನ್ನೂ ವಿಸ್ತರಿಸಬಲ್ಲವು ಮತ್ತು ಹೊಸ ದರ್ಶನವನ್ನು ಹುಟ್ಟುಹಾಕಬಲ್ಲವು. ಇದು ಹುಟ್ಟಿಸಿದ ತಾಯನ್ನೇ ಕೂಸನ್ನಾಗಿ ಮತ್ತೊಮ್ಮೆ ಹಡೆಯುವ ಕೆಲಸ. ಕನ್ನಡದ ಅನೇಕ ಮಹತ್ವದ ಕೃತಿಗಳು ಹುಟ್ಟಿದ್ದು ಮತ್ತು ನಮ್ಮ ತಾತ್ವಿಕ ನಂಬಿಕೆಗಳನ್ನು ರಾಜಕೀಯ ಗ್ರಹಿಕೆಗಳನ್ನು ಸೂಕ್ಷ್ಮಗೊಳಿಸಿದ್ದು ಹೀಗೆ. ಶರಣರ ಚಳವಳಿ ಮತ್ತು ವಚನಗಳ ಸಂಬಂಧವೂ ಹೀಗೇ ಸಂಭವಿಸಿದ್ದು. ಇದು ಸಾಹಿತ್ಯ ಮತ್ತು ಚಳವಳಿಗಳ ನಡುವೆ ಇರುವ ಅರ್ಥಪೂರ್ಣ ಸಂಬಂಧದ ಪರಿ.
 
ಸಾಹಿತ್ಯಕ ಚಳವಳಿಯು ಹೊಸ ಸಂವೇದನೆಯ ಕೃತಿಗಳನ್ನು ಪ್ರಕಟಿಸುವ ಮೂಲಕ ತನ್ನ ಚಹರೆಯನ್ನು ತೋರತೊಡಗುತ್ತದೆ. ಅದು ಹೊಸ ರೂಪಕಗಳನ್ನು ಅಥವಾ ನುಡಿಗಟ್ಟನ್ನು ಸೃಷ್ಟಿಸುತ್ತದೆ. ಹೊಸಭಾಷೆಯನ್ನು ಕಟ್ಟುತ್ತದೆ. ಇಲ್ಲಿ ಹೊಸಭಾಷೆಯೆಂದರೆ, ಹೊಸ ದಾರ್ಶನಿಕತೆ ಮತ್ತು ಹೊಸ ಕ್ರಿಯಾಶೀಲತೆ ಎಂದೂ ಅರ್ಥ. ಆಗ ಅಲ್ಲಿ ತನಕ ಇರುವ ಸಾಹಿತ್ಯದ ಸಾಂಪ್ರದಾಯಿಕ ವ್ಯಾಖ್ಯೆ ವಿಸ್ತರಣೆ ಪಡೆಯಬಲ್ಲವು; ಅಂತಹ ಹೊಸ ಚಳವಳಿಯು ಅದು ಹೊಸ ಮನುಷ್ಯರ ಹುಡುಕಾಟ ಮತ್ತು ಹೊಸ ಸಮಾಜದ ಹುಡುಕಾಟವೂ ಆಗಿರಬಲ್ಲವು; ಇಲ್ಲಿ ಸಾಹಿತ್ಯ ಮತ್ತು ಸಮಾಜ ಮೀಮಾಂಸೆ ಎರಡೂ ಏಕೀಭವಿಸಬಲ್ಲವು. ಸ್ವತಃ ಚಳವಳಿಯೇ ತನ್ನ ಪಥಚಲನೆಗೆ ಹಾಕಿಕೊಂಡ ನೀಲನಕ್ಷೆಯ ಸರಹದ್ದನ್ನು ಅರ್ಥಪೂರ್ಣವಾಗಿ ಮೀರಿಹೋಗಬಲ್ಲದು.
ಈ ದಿಸೆಯಲ್ಲಿ ಧಾರವಾಡದ ಜನಸಾಹಿತ್ಯ ಸಮಾವೇಶವು ಇಂತಹ ಸಾಧ್ಯತೆಗಳನ್ನು ಮೂಡಿಸಿದೆ. ಅದರ ಹಿಂದೆ, ಜೈಪುರ ಲಿಟರರಿ ಫೆಸ್ಟಿವಲ್ ಮಾದರಿಯಲ್ಲಿ ಆಯೋಜಿತವಾಗಿದ್ದ ಧಾರವಾಡ ಸಾಹಿತ್ಯ ಸಂಭ್ರಮಕ್ಕೆ ಎದ್ದ ವಿರೋಧದ ಆಯಾಮ ಇದ್ದುದು ನಿಜ. ಆದರೆ ಸಮಾವೇಶ ಜರುಗಿದ ಪರಿ, ಆ ವಿರೋಧದ ಸೀಮಿತ ಎಲ್ಲೆಯನ್ನು ದಾಟಿತು. ಹೀಗಾಗಿಯೇ ಸಾಹಿತ್ಯ ಸಂಭ್ರಮದ ವಿರುದ್ಧ ಖಂಡನೆಯ ಮಾತುಗಳು ಅಲ್ಲಿ ವಿಶೇಷವಾಗಿ ಮೊಳಗಲಿಲ್ಲ. ಬದಲಿಗೆ ಅದು ಮಾರುಕಟ್ಟೆ ಸಂಸ್ಕೃತಿಗಳು, ನಮ್ಮ ಸಮಾಜದ ಮತ್ತು ವೈಯಕ್ತಿಕವಾಗಿ ನಮ್ಮ ಬದುಕಿನ ಬೇರೆಬೇರೆ ಸ್ತರಗಳನ್ನು ಹೇಗೆ ಆವರಿಸುತ್ತಿವೆ ಎಂಬ ಕುರಿತು ಚಿಂತನೆ ನಡೆಸಿತು. ಅದು ಹೊಸತಲೆಮಾರಿನ ಲೇಖಕರು ಭಾಗವಹಿಸಿದ್ದ ಮತ್ತು ತಮ್ಮ ಬರಹದ ಕಷ್ಟಸುಖಗಳನ್ನು ಹಂಚಿಕೊಳ್ಳುವ ಕಾರ್ಯಕ್ರಮವಾಗಿ, ಸಮಾನ ಆಸಕ್ತರು ಹಲವಾರು ದಿನಗಳಿಂದ ಒಂದೆಡೆ ಸೇರಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುವ ವೇದಿಕೆಯಾಗಿ, ನಾಡಿನ ರಾಜಕೀಯ ಸಾಮಾಜಿಕ ಬಿಕ್ಕಟ್ಟುಗಳನ್ನು ಚಿಂತಿಸುವ ಸಭೆಯಾಗಿ ಮಾರ್ಪಟ್ಟಿತು. ಸಾಹಿತ್ಯವೆಂದರೆ ಕೇವಲ ಕತೆ ಕಾವ್ಯ ಕಾದಂಬರಿಗಳಲ್ಲ. ಭಾಷೆಯನ್ನು ಬಳಸಿಕೊಂಡು ಹುಟ್ಟುವ ಮತ್ತು ಓದುಗರ ಸಂವೇದನೆಯನ್ನು ಸೂಕ್ಷ್ಮಗೊಳಿಸುವ ಎಲ್ಲ ಅರ್ಥಪೂರ್ಣ ಅಭಿವ್ಯಕ್ತಿಗಳು ಎಂದು, ಅದರ ವ್ಯಾಖ್ಯೆಯನ್ನು ವಿಸ್ತರಿಸಲು ಯತ್ನಿಸಿತು.
 
ನನಗಲ್ಲಿ ಮುಖ್ಯವಾಗಿ ಕಂಡಿದ್ದು, ಹೊಸ ತಲೆಮಾರಿನ ಲೇಖಕರಲ್ಲಿದ್ದ ಕುದಿತ, ಕನಸು, ಪ್ರಾಮಾಣಿಕತೆ, ತಾತ್ವಿಕ ಹೊಯ್ದಾಟ, ನೈತಿಕ ನಿಷ್ಠುರತೆ, ಹಾಗೂ ಭಿನ್ನಮತಗಳನ್ನು ಹಂಚಿಕೊಳ್ಳುವ ಸಂವಾದದ ಗುಣ. ಒಬ್ಬ ಲೇಖಕ ನಮ್ಮಲ್ಲಿ ಹಾಡುಗಳೇ ಸತ್ತಿವೆ ಎಂದರೆ, ಮತ್ತೊಬ್ಬ ಲೇಖಕ ಹಾಡು ಸತ್ತಿಲ್ಲವೆಂದು ಹೇಳಿದರು. ಸ್ವತಃ ಹೋರಾಟದ ಕವಿಗಳಂತೆ ಜನಪದ ಧಾಟಿಯಲ್ಲಿ ಹಾಡುಗವಿತೆಗಳನ್ನು ಹಾಡಿ ತೋರಿಸಿದರು; ನನಗೆ ಈ ಸಮಾಜದ ಸಂಕಟ ನೋಡಿ ಅಳುಬರುತ್ತದೆ ಎಂದು ಒಬ್ಬರೆಂದರೆ, ಜನ ಅಪಾರ ಇಕ್ಕಟ್ಟುಗಳಲ್ಲೂ ಬದುಕಿದ್ದಾರೆ. ಹಾಗೆ ಬದುಕಲು ಬೇಕಾದ ಚೈತನ್ಯವನ್ನು ಕೂಡ ಲೇಖಕರು ಶೋಧಿಸಬೇಕು ಎಂದು ಇನ್ನೊಬ್ಬರು ಸೂಚಿಸಿದರು; ಒಬ್ಬ ಲೇಖಕರು ಸಮಾಜವನ್ನು ಬೇರೆಬೇರೆ ಸ್ತರಗಳಲ್ಲಿ ವಿಂಗಡಿಸುತ್ತ, ಇದು ನನ್ನ ಸಮಾಜವಲ್ಲ ಎಂದು ಹೇಳುತ್ತಿದ್ದರೆ, ಮತ್ತೊಬ್ಬ ಲೇಖಕಿ, ನೀವು ಯಾವುದು ನನ್ನ ಸಮಾಜವಲ್ಲ ಎಂದು ಹೇಳುತ್ತಿದ್ದೀರೊ ಅಲ್ಲಿನ ಮಹಿಳೆಯರು ದಮನಿತರಲ್ಲವೇ ಎಂದು ಪ್ರಶ್ನೆ ಕೇಳಿದರು. ಈ ಅರ್ಥದಲ್ಲಿ ಸಮಾವೇಶದಲ್ಲಿ ಸ್ವವಿಮರ್ಶೆಯ ಆಯಾಮವು ಇತ್ತು.
ಕನ್ನಡದಲ್ಲಿ ಹೊಸತಲೆಮಾರಿನ ಪ್ರತಿಭಾವಂತ ಲೇಖಕರು ಕಳೆದ ಹತ್ತುವರ್ಷಗಳಿಂದ ಪುಟಿವ ಚೈತನ್ಯ ಪ್ರಕಟಿಸುತ್ತಿರುವರು. ಅನೇಕ ಪ್ರಕಾರಗಳಲ್ಲಿ ಅಭಿವ್ಯಕ್ತಿ ಮಾಡುತ್ತಿರುವರು. ಹಿರಿಯ ತಲೆಮಾರಿನ ಅತ್ಯುತ್ತಮ ಬರಹದೊಂದಿಗೆ ಅವುಗಳ ಅನುಸಂಧಾನದ ಪ್ರಕ್ರಿಯೆಯು ಅಷ್ಟೊಂದು ಗಾಢವಾಗಿದೆ ಅನಿಸುವುದಿಲ್ಲ. ಅವರ ಮುಂದೆ ಹಿರೀಕರ ಸಾಧನೆಗಳು ಸವಾಲಿನಂತೆಯೂ ಕೆಲವು ಹಿರೀಕರ ಪತನವು ಪಾಠವಾಗಿಯೂ ನಿಂತಿವೆ. ಹೊಸ ಚಳವಳಿಯನ್ನು ಕಟ್ಟಬಲ್ಲ ಕಸುವು ಅವರಲ್ಲಿ ಕಾಣಬರುತ್ತಿದೆ. ನಾಳಿನ ದಿನಗಳಲ್ಲಿ ಇದು ಹೇಗೆ ನಿಜಗೊಳ್ಳುತ್ತದೆಯೊ ಕಾದುನೋಡಬೇಕಿದೆ. ಒಂದೊಮ್ಮೆ ಅದು ನಿಜಗೊಂಡರೆ, ಅದರಲ್ಲಿ ಸಮಾವೇಶದಲ್ಲಿ ಪಾಲುಗೊಂಡವರ ಅಥವಾ ಹೊಸತಲೆಮಾರಿನವರ ಕೊಡುಗೆ ಮಾತ್ರ ಇರುವುದಿಲ್ಲ. ಬದಲಿಗೆ ಹೊಸ-ಹಳೆ ತಲೆಮಾರುಗಳ ಅಂತರ ಅಳಿಸಿಕೊಂಡ, ನಮ್ಮ ಕಾಲದ ಎಲ್ಲ ಆರೋಗ್ಯಕರ ಮನಸ್ಸುಗಳ ಕೂಡುಕೊಡುಗೆಯೇ ಇರುತ್ತದೆ.